ಕನ್ನಡಕಗಳು : ಕಣ್ಣಿನ ನೋಟದ ಕುಂದುಗಳಿಗೂ ಚಾಳೀಸಕ್ಕೂ ರೋಗಿ ಬಳಸುವಂತೆ ಕಣ್ಣಿನ ವೈದ್ಯರು ನಿಯಮಿಸುವ ನೋಟದ ಸಾಧನಗಳು. ಮೂರು ಬಗೆಗಳ ನೋಟದ ಕುಂದುಗಳಲ್ಲಿ, ದೂರ ನೋಟವನ್ನು ಉಬ್ಬು (ಕಾನ್ವೆಕ್ಸ್‌) ಮಸೂರದಿಂದಲೂ ಹತ್ತಿರ ನೋಟವನ್ನು ತಗ್ಗು (ಕಾನ್ಕೇವ್) ಮಸೂರದಿಂದಲೂ ಅಸಮನಿಟ್ಟು ದೃಷ್ಟಿದೋಷವನ್ನು (ಅಸ್ಟಿಗ್ಮಾಟಿಸಂ) ಉರಳೆಯಕಾರದ ಮಸೂರದಿಂದಲೂ ಸರಿಯಾಗಿ ಕಾಣುವಂತೆ ಮಾಡಬಹುದು. 40 ವರ್ಷ ದಾಟಿದವರಲ್ಲಿ ಬರುವ ಚಾಳೀಸದಲ್ಲಿ ಹತ್ತಿರದಲ್ಲಿರುವುವು ಕಾಣುವ ಹಾಗೆ ಉಬ್ಬು ಮಸೂರವನ್ನು ಕೊಡಲಾಗುತ್ತದೆ.
ಕನ್ನಡಕಗಳ ಮಸೂರಗಳನ್ನು ತಯಾರಿಸುವ ಗಾಜು ವಿಶೇಷ ಬಗೆಯದು. ರಿಫ್ರಾಕ್ಟಿವ್ ಇಂಡೆಕ್ಸ್‌ 1.523 ಇರುವ ಕ್ರೌನ್ ಗಾಜಿನದು. ಹಾಗೇ ಅವನ್ನು ಹಿಡಿದಿರುವ ಚೌಕಟ್ಟುಗಳು ಉಕ್ಕು, ಪ್ಲಾಸ್ಟಿಕ್, ಬೆಳ್ಳಿ ಅಥವಾ ಚಿನ್ನದವಾಗಿರಬಹುದು.

ಕನ್ನಡಕಗಳ ಮಸೂರಗಳ ಆಕಾರ ಗುಂಡು, ಅಂಡಾಕಾರ, ಅಂಡಾಕಾರದ್ದರ ಮೇಲಿನರ್ಧ ಕತ್ತರಿಸಿದ್ದು, ಉಬ್ಬುಗೋಳ-ಹೀಗೆ ಬಗೆ ಬಗೆಯಾಗಿರಬಹುದು ಅಲ್ಲದೆ ಕನ್ನಡಕದ ಮೇಲ್ಭಾಗವೂ ಕೆಳಗಿನದೂ ಬೇರೆ ಬೇರೆ ಮಸೂರಗಳಿಂದಾಗಿರಬಹುದು. ಅಡ್ಡಕೊಯ್ಯದಲ್ಲಿ ಮಸೂರಗಳು ಒಂದೊಂದು ಕಡೆಯೂ ಉಬ್ಬೋ ತಗ್ಗೋ ಚಪ್ಪಟೆಯಾಗೋ ಇರಬಹುದು. ಕನ್ನಡಕಗಳ ಮಸೂರಗಳ ಬಾಗು ಕಣ್ಣುಗುಡ್ಡೆಯದಕ್ಕೆ ಸಮಾನಾಂತರವಾಗಿದ್ದರೇ ಚೆನ್ನು. ಹೊರಗಡೆ ಕಿವಿಗಳಿಗೋ ಮೂಗಿಗೋ ತಗಲಿಕೊಳ್ಳುವ ಕನ್ನಡಕಗಳ ಬದಲಾಗಿ, ಚೌಕಟ್ಟು ಇಲ್ಲದೆಯೇ ತೆಳುವಾದ ಮಸೂರ ಬಿಲ್ಲೆಗಳನ್ನು ಕಣ್ಣುರೆಪ್ಪೆಗಳೊಳಗೆ ನೇರವಾಗಿ ಕಣ್ಣುಗುಡ್ಡೆಯ ಮೇಲೆ ಇರಿಸುವ ಸಂಪರ್ಕ ಮಸೂರಗಳು (ಕಾಂಟಾಕ್ಟ್‌ ಲೆನ್ಸಸ್) ಇತ್ತೀಚೆಗೆ ಬರುತ್ತಿವೆ. ಈ ಮಸೂರಗಳನ್ನು ವಿಶೇಷ ರೀತಿಯ ಪ್ಲಾಸ್ಟಿಕ್ (ಪಿ.ಎಂ.ಎ.ಪಿ) ನಿಂದ ತಯಾರಿಸಲಾಗುತ್ತದೆ. ಕಣ್ಣೀರಿನಿಂದ ಕಣ್ಣು ಗುಡ್ಡೆಗೇ ಅಂಟಿರುವುದರಿಂದ ಕಣ್ಣುಗುಡ್ಡೆ ಎತ್ತತ್ತಿರುಗಿದರೆ ಅತ್ತ ತಿರುಗುವುದು ವಿಶೇಷ ಅನುಕೂಲ. ನೋಟಕ್ಕೆ ಯಾವ ಅಡ್ಡಿಯೂ ಇರದು. ಕಣ್ಣುಗುಡ್ಡೆಯ ಮುಂದುಗಡೆ ಇರುವ ಪಾರದರ್ಶಕ ಪಟಲ ಕಾರ್ನಿಯಾದ ಮೇಲೆಯೇ ಇರಿಸುವುದರಿಂದ ಅದರ ಅಸ್ತಿತ್ವವೇ ಬೇರೆಯವರಿಗೆ ಗೊತ್ತಾಗುವುದಿಲ್ಲ. ಸ್ಪರ್ಷಮಸೂರಗಳು ಉಪಯೋಗವಾಗುವ ಮುಖ್ಯ ಸಂದರ್ಭಗಳೆಂದರೆ-ಕಾರ್ನಿಯದ ಮೇಲೆ ಆದ ವಿವಿಧ ಗಾಯಗಳು (ಸುಟ್ಟ ಗಾಯಗಳು ಮತ್ತು ಬೇರೆ ಗಾಯಗಳು). ವಿವಿಧ ದೃಷ್ಟಿದೋಷಗಳು, ಒಂದು ಕಣ್ಣಿನಲ್ಲಿ ಮಾತ್ರ ಕಣ್ಣಿನಪೊರೆ ಶಸ್ತ್ರಕ್ರಿಯೆಯಾಗಿ ಮತ್ತೊಂದು ಕಣ್ಣು ಸಾಮಾನ್ಯ ದೃಷ್ಟಿ ಹೊಂದಿದ್ದಾಗ, ಕಾರ್ನಿಯಾದ ಕಾಯಿಲೆಗಳಾದ-ಕೆರಟೋ ಕೋನಸ್, ಕೆರಟೋಗ್ಲೋಬಸ್ ಕಾಯಿಲೆಗಳಲ್ಲಿ.

ಕೋರೈಸುವ ಬೆಳಕು, ವಿಕಿರಣತೆ, ಕಿಡಿ, ಲೋಹ ಚೂರುಗಳು ಹಾರುವುದನ್ನು ತಡೆಯಲೂ ಕಾಪಿನ ಕನ್ನಡಕಗಳು ಬಳಕೆಯಲ್ಲಿವೆ. ಬೆಳಕಿನ ಹೊಳಪನ್ನು ಬಣ್ಣದ ಗಾಜುಗಳಿಂದ ತಗ್ಗಿಸಬಹುದು. ಬೇಡದ ವಿಕಿರಣಗಳನ್ನು ವಿಶೇಷ ಗಾಜುಗಳಿಂದ ತಡೆಯಬಹುದು. ಸಾಮಾನ್ಯವಾಗಿ ಇಂಥ ಕನ್ನಡಕಗಳಿಗೆ ಪಕ್ಕಗಳಲ್ಲೂ ತಡೆಗಳಿರುತ್ತವೆ. ಒಡೆದರೂ ಚೂರು ಚೂರುಗಳಾಗಿ ಹಾರಿಬೀಳದ ಎರಡು ಮೂರು ಗಾಜು ಪದರಗಳ ಕನ್ನಡಕಗಳು ಏಟು ಬಿದ್ದರೂ ಕಣ್ಣಿಗೆ ಚೂರುಗಳು ಹಾರದಂತೆ ತಡೆಯುತ್ತವೆ.

ವಿಶೇಷ ಉದ್ದೇಶಗಳಿಗಾಗಿ ಕೆಲವು ಬಗೆಗಳ ಕನ್ನಡಕಗಳಿವೆ. ನೋಟ ತೀರ ಕುಂದಿದವರಿಗಾಗಿ ದೂರದರ್ಶಕ ಮಸೂರಗಳಿರುವುವು. ಈಜುವಾಗ ನೀರಲ್ಲೂ ಕಾಣುವಂತೆ ಅನುಕೂಲಿಸುವವು. ಹಾಸಿಗೆ ಹಿಡಿದ ರೋಗಿ ಮಲಗಿಕೊಂಡೇ ಓದುವಂಥವು, ಗಡಿಯಾರ ರಿಪೇರಿ ಮುಂತಾದ ಕೆಲಸಗಳಲ್ಲಿ ಬಲು ಹತ್ತಿರದಲ್ಲಿ ಸಣ್ಣ ಸಾಮಾನುಗಳನ್ನು ಜೋಡಿಸಲು ಕಣ್ಣುಗಳಿಗೆ ಸಿಕ್ಕಿಸಿಕೊಳ್ಳುವವು. ಅರೆಗಣ್ಣೋಟದಲ್ಲಿ (ಹಮಿಯನೋಪಿಯ) ಚೆನ್ನಾಗಿ ಕಾಣುವ ಕಣ್ಣುಭಾಗಕ್ಕೆ ಮಾತ್ರ ಅಳವಡಿಸಿದ್ದು, ಜೋಲುಬಿದ್ದ ರೆಪ್ಪೆಗಳನ್ನು ಎತ್ತಿಹಿಡಿವ ಕನ್ನಡಕಗಳೂ ಇವೆ.	(ಡಿ.ಸಿ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ